ಕೂಡಾವಳಿ

ಗಂಡ ಬಿಟ್ಟ ಅಥವಾ ಗಂಡಸತ್ತ ಹೆಣ್ಣು ಒಪ್ಪಿದ ಬೇರೊಬ್ಬನೊಡನೆ ಸಂಸಾರ ಜೀವನ ನಡೆಸಲು ಅನುವು ಮಾಡಿಕೊಟ್ಟಿರುವ ಒಂದು ಪದ್ಧತಿ. ಕೂಟಿಕೆ, ಕೂಡಿಕೆ, ಸೀರುಡಿಕೆ, ಉಡಿಕೆ ಎಂಬ ಪದಗಳು ಇದೇ ಅರ್ಥದಲ್ಲಿ ಬಳಕೆಯಲ್ಲಿವೆ.

	ಈ ಪದ್ಧತಿ ಸಾಮಾನ್ಯವಾಗಿ ಬ್ರಾಹ್ಮಣರನ್ನುಳಿದು ಉಳಿದೆಲ್ಲ ಕೋಮುಗಳಲ್ಲಿಯೂ ಕಂಡುಬರುತ್ತದೆ. ಹೆಂಡತಿ ಸತ್ತಮೇಲೆ ಗಂಡಸು ಬೇರೊಬ್ಬಳನ್ನು ಮದುವೆಯಾಗಿ ಸಂಸಾರ ನಡೆಸಲು ಧರ್ಮಶಾಸ್ತ್ರದಲ್ಲಿ ಅನುವಿದೆ. ಹಾಗೆಯೆ ಹೆಂಗಸಿಗೂ ಒಂದು ರಹ ಇರಬೇಡವೇ ಎಂಬ ಪ್ರಶ್ನೆ ಹಿಂದಿನಿಂದಲೂ ಕಂಡುಬರುತ್ತಿದೆ. ಗಂಡ ಬಿಟ್ಟ ಹೆಂಗಸಿನ ಭವಿಷ್ಯವೇನು? ವಿಧವೆಯ ಪಾಡೇನು? ಒಂದು ಕಾಲದಲ್ಲಿ ಗಂಡನೊಡನೆ ಹೆಂಡತಿಯೂ ಚಿತೆಯನ್ನೇರುತ್ತಿದ್ದುದುಂಟು. ಅನೇಕ ಸ್ತ್ರೀಯರು ಸ್ವೇಚ್ಛೆಯಿಂದ ಮಾಂಗಲ್ಯಸೂಚಕವಾದ ಕುಂಕುಮ, ತಲೆಗೂದಲು, ಅಲಂಕರಣಾದಿಗಳನ್ನು ತ್ಯಜಿಸಿ ವೈರಾಗ್ಯ ಜೀವನವನ್ನು ಅಂಗೀಕರಿಸುತ್ತಾರೆ. ಆದರೆ ಅಂಥ ಸಂನ್ಯಾಸಕ್ಕೆ ಮನಸ್ಸಿಲ್ಲದಾಗಲೂ ಗಂಡ ಸತ್ತೊಡನೆಯೇ ಆಕೆಯ ರೂಪನ್ನು ವಿಕೃತಗೊಳಿಸಿ ಸಂಸಾರಕ್ಕೆ ಆಕೆ ಹೊರತಾಗುವಂತೆ ಮಾಡುವ ಆಚಾರ ಇಂದಿಗೂ ಬಳಕೆಯಲ್ಲಿದೆ. ಒಂದು ವೇಳೆ ಆಕೆ ತಲೆ ಬೋಳಿಸಿಕೊಳ್ಳದೆ ಸಕೇಶಿಯಾಗಿ ಉಳಿದರೂ ಗೌರವಸ್ಥರ ವಡುವೆ, ಶುಭಾಶುಭ ಕಾರ್ಯಗಳಲ್ಲಿ ಆಕೆಗೆ ಸ್ಥಾನವಿರುವುದಿಲ್ಲ. ಕೂಡಾವಳಿ ಪದ್ಧತಿಯಲ್ಲಿ ಹೆಂಗಸಿನ ಈ ಮುಖ್ಯ ಜೀವನ ಸಮಸ್ಯೆಗೆ ಒಂದು ರೀತಿಯ ಉತ್ತರವನ್ನು ಕಾಣಬಹುದಾಗಿದೆ. 

	ಪ್ರಾಯವೂ ಅಭಿಲಾಷೆಯೂ ಇರುವ ಹೆಣ್ಣು ಮತ್ತೆ ಸಂಸಾರಿಯಾಗುವ ಸೌಲಭ್ಯವನ್ನು ಕೂಡಾವಳಿ ಆಕೆಗೆ ಒದಗಿಸಿದೆ. ಪ್ರಾಯ ಮಿತಿಮೀರಿದ್ದಾಗ ಅಥವಾ ಪ್ರಾಯದ ಮಕ್ಕಳಿದ್ದಾಗ ಕೂಡಾವಳಿ ಅವಕಾಶ ಉಂಟೆ ಎಂಬುದು ವೈಯಕ್ತಿಕ ಸಮಸ್ಯೆ. ಗಂಡು ಹೆಣ್ಣು ಒಪ್ಪಿದಲ್ಲಿ ಆಗಬಹುದು. ಕೆಲವು ಆದಿವಾಸಿ ಗುಂಪಿನವರಲ್ಲಿ ಪ್ರಾಯದ ಮಕ್ಕಳಿದ್ದಾಗಲೂ ಕೂಡಾವಳಿ ನಡೆಯುತ್ತದೆ. 

	ತಂದೆತಾಯಿಗಳು ಹಾಗೂ ಕುಲಸ್ಥರು ಒಪ್ಪಿಯೇ ವಿಧಿವತ್ತಾಗಿ ಕೂಡಾವಳಿ ಮಾಡಿಕೊಡುತ್ತಾರೆ. ಅಂದರೆ ಹೆಣ್ಣು ಗಂಡು ಕೂಡಿಸಿ ಹಸೆಹಚ್ಚುವುದು; ಮುತ್ತೈದೆಯರಿಂದ ಸೇಸೆ ಇಡಿಸಿ ಹರಸುವುದು; ಕುಲಸ್ಥರಿಗೆ ಊಟ ಹಾಕಿಸುವುದು - ಮುಂತಾದುವೆಲ್ಲ ಯಥಾವತ್ತಾಗಿಯೇ ಜರುಗುತ್ತದೆ. ಇಷ್ಟೆಲ್ಲ ಖರ್ಚುವೆಚ್ಚವನ್ನು ನಿಭಾಯಿಸಲಾಗದವರು ಕೇವಲ ಒಂದು ಸೀರೆ ಉಡಿಸಿ ಹಿರಿಯರ ಅನುಮತಿ, ಆಶೀರ್ವಾದಗಳೊಂದಿಗೆ ಹೆಣ್ಣನ್ನು ಕರೆದೊಯ್ಯುತ್ತಾರೆ.

	ಹೀಗೆ ಎರಡನೆಯ ಸಂಬಂಧ ಬೆಳೆಸುವ ಮನೆತನದವರನ್ನು ಕೂಟಿಕೆ ಸಾಲಿನವರು ಎಂದು ಹೀಗಳೆದು ಕೊಡುಕೊಳೆ ಮಾಡದವರೂ ಇದ್ದಾರೆ. ಕೂಡಾವಳಿ ಪದ್ಧತಿಯಿಂದ ಸಾಮಾಜಿಕವಾಗಿ ಅನೇಕ ಅನುಕೂಲಗಳು ಏರ್ಪಟ್ಟಿವೆ ಎಂಬ ವಿಷಯ ಮನದಟ್ಟಾಗುವವರೆಗೂ ಇಂಥ ಆಕ್ಷೇಪಗಳು ಇದ್ದೇ ಇರುತ್ತವೆ. ಜನ ನಾಗರಿಕರಾದಂತೆಲ್ಲ ಮದುವೆಯ ಬಗೆಗಿನ ಅಭಿಪ್ರಾಯಗಳು ಮಾರ್ಪಡುತ್ತವೆ. ವಿವಾಹ ವಿಚ್ಚೇದ, ಮರುಮದುವೆಗಳು ಸಾಮಾನ್ಯವಾಗುತ್ತಿವೆ. ಹೀಗಾಗಿ ಕೂಡಾವಳಿಯ ಬಗೆಗಿರುವ ಸಂಕೋಚಗಳೂ ಕ್ರಮೇಣ ತಾವಾಗಿ ಮಾಯವಾಗುತ್ತವೆಯೆಂದು ತೋರುತ್ತದೆ. 						
(ಎಸ್.ಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ